ವರದಾಚಾರ್ಯ, ಕಾನಕಾನಹಳ್ಳಿ
	1870-1942. ಪ್ರಸಿದ್ಧ ಕನ್ನಡ ವಿದ್ವಾಂಸರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನಕಪುರದಲ್ಲಿ (ಕಾನಕಾನಹಳ್ಳಿ) ಜನಿಸಿದರು. ತಂದೆ ಲಕ್ಷ್ಮೀನರಸಿಂಹಾಚಾರ್ಯರು ಭೂಸ್ವಾಮಿಗಳಾಗಿದ್ದರಲ್ಲದೆ, ವೈದ್ಯವೃತ್ತಿಯನ್ನೂ ನಡೆಸುತ್ತಿದ್ದರು. ವರದಾಚಾರ್ಯರು ಆಲೂರಿನ ಎ.ವಿ.ಸ್ಕೂಲಿನಲ್ಲಿ ಓದಿ ಕನ್ನಡ ಲೋಯರ್ ಸೆಕೆಂಡರಿ ಪರೀಕ್ಷೆ ಯಲ್ಲಿ ತೇರ್ಗಡೆಯಾದರು. ಸಂಸ್ಕøತವನ್ನು ಕಲಿಯುವ ಆಸೆಯಿಂದ ಮೈಸೂರಿನ ಮಹಾರಾಜ ಸಂಸ್ಕøತ ಪಾಠಶಾಲೆ ಸೇರಿದರು. ಅಲ್ಲಿ ಪ್ರಾಧ್ಯಾಪಕರಾಗಿದ್ದ ಸಜ್ಜಿ ತಾತಾಚಾರ್ಯರ ಶಿಷ್ಯರಾಗಿ ಅವರ ಆಶ್ರಯದಲ್ಲಿ ಬೆಳೆದರು. ಸಂಸ್ಕøತ ಸಾಹಿತ್ಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪಂಡಿತ ಕರಿಬಸವಶಾಸ್ತ್ರಿಗಳ ಸಲಹೆಯಂತೆ ಮೈಸೂರಿನಲ್ಲಿ ಆಗ ತಾನೆ ಆರಂಭವಾಗಿದ್ದ ಭಾಷೋಜ್ಜೀವಿನಿ ಪಾಠಶಾಲೆ ಸೇರಿ ಕನ್ನಡದಲ್ಲೂ ಪಾಂಡಿತ್ಯ ಗಳಿಸಿಕೊಂಡರು. ಅಲ್ಲಿ ಇವರಿಗೆ ತಿರುವಳ್ಳೂರು ಶ್ರೀನಿವಾಸ ರಾಘವಾಚಾರ್ಯ ಸಹಾಧ್ಯಾಯಿಗಳಾಗಿದ್ದರು. ಈ ಇಬ್ಬರ ಸ್ನೇಹ ಕೊನೆಯ ತನಕವೂ ಗಾಢವಾಗಿತ್ತು

	ಮೈಸೂರು ಮಹಾರಾಜ ಪ್ರೌಢಶಾಲೆಯಲ್ಲಿ ಕನ್ನಡ ಪಂಡಿತರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ ಇವರು ಅನಂತರ ಮಹಾರಾಜ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿ ನೇಮಕಗೊಂಡರು. ಸುಮಾರು ಮೂವತ್ತುಮೂರು ವರ್ಷಗಳಷ್ಟು ಸುದೀರ್ಘ ಕಾಲ ಕನ್ನಡ ಪಾಠ ಹೇಳಿ ತಮ್ಮ ಅತ್ಯುತ್ತಮ ಬೋಧನೆಯಿಂದ ಸಾವಿರಾರು ವಿದ್ಯಾರ್ಥಿಗಳ ಪ್ರೀತಿ, ಗೌರವ, ಭಕ್ತಿಗಳಿಗೆ ಪಾತ್ರರಾದರು. ತಲಸ್ಪರ್ಶಿಯಾದ ಪಾಂಡಿತ್ಯ ಸಂಪಾದಿಸಿಕೊಂಡಿದ್ದ ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿಸಿರುವ ಕನ್ನಡ ಸಾಹಿತ್ಯ ಕೈಪಿಡಿಯಲ್ಲಿ (1927) ಶಬ್ದಾಲಂಕಾರ, ಅರ್ಥಾಲಂಕಾರ ಪ್ರಕರಣಗಳನ್ನು ಬರೆದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆಯಲ್ಲಿ (1916-17) ಕರ್ಣಾಟಕ ಶಬ್ದಾನುಶಾಸನ ತತ್ತ್ವಾಲೋಕಂ ಎಂಬ ಸಂಶೋಧನ ಲೇಖನಗಳನ್ನು ಪ್ರಕಟಿಸಿದ್ದಾರೆ. ಲಕ್ಷ್ಮೀಶನ ಜೈಮಿನಿ ಭಾರತದ ಪರಿಷ್ಕರಣ ಕಾರ್ಯದಲ್ಲಿ ಇವರು ಪಿ.ಆರ್. ಕರಿಬಸವಶಾಸ್ತ್ರಿ ಗಳಿಗೆ ನೆರವಾಗಿದ್ದರು.

	ಇವರ ಪಾಂಡಿತ್ಯವನ್ನು ಮೆಚ್ಚಿಕೊಂಡು ಆಗಿನ ಮೈಸೂರು ಮಹಾರಾಜರು ಇವರನ್ನು ತಮ್ಮ ಆಸ್ಥಾನ ವಿದ್ವಾಂಸರಾಗಿ ನೇಮಿಸಿಕೊಂಡು ಗೌರವಿಸಿದ್ದರು.					
				    (ಕೆ.ವಿ.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ